ಬೆಂಗಳೂರಿನಲ್ಲಿ ಟ್ರಾಫಿಕ್ ಅಂದ್ದರೆ ಜನರಿಗೆ ಮೊದಲು ನೆನಪು ಆಗೋ ಹೆಸರು ಸಿಲ್ಕ್ ಬೋರ್ಡ್ ಜಂಕ್ಷನ್. ಈ ಒಂದು ಸ್ಥಳವೇ ನಗರದ ಟ್ರಾಫಿಕ್ ಸಂಕಷ್ಟಕ್ಕೆ ಪ್ರತೀಕವಾಗಿ ಪರಿಣಮಿಸಿದೆ. ಕೆಲಸಕ್ಕೆ ಹೋಗುವ ಹಾಗು ಬರುವ ಪೀಕ್ ಅವರ್ ಸಮಯದಲ್ಲಿ ಇಲ್ಲಿ ವಾಹನಗಳು ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ಸಾಲಾಗಿ ನಿಂತಿರುವ ದೃಶ್ಯ ಸಾಮಾನ್ಯ. ಕೆಲವೊಮ್ಮೆ ಸಿಗ್ನಲ್ ದಾಟಲು ಅರ್ಧ ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ದಿನವೂ ಈ ಮಾರ್ಗವನ್ನು ಬಳಸುವ ಸಾವಿರಾರು ಜನಸಾಮಾನ್ಯರು ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳು ವರ್ಷಗಳಿಂದ ಟ್ರಾಫಿಕ್ ನರಕ ಅನುಭವಿಸಿದ್ದಾರೆ.
ಆದರೆ ಈಗ ಈ ಸಂಕಷ್ಟದಿಂದ ಕೊನೆ ಬೀಳುವ ಲಕ್ಷಣಗಳು ಕಾಣಿಸುತ್ತಿವೆ.
ಸಿಲ್ಕ್ ಬೋರ್ಡ್ ಬಳಿ ನಿರ್ಮಾಣವಾಗಿರುವ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ಈಗ ಮಹತ್ವದ ಹಂತ ತಲುಪಿದೆ. ಇಷ್ಟುದಿನ ಈ ಮೇಲ್ಸೇತುವೆಯ ಒಂದು ಭಾಗ ಮಾತ್ರ ವಾಹನ ಸಂಚಾರಕ್ಕೆ ಲಭ್ಯವಿತ್ತು. ವಿಶೇಷವಾಗಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಕಡೆಗೆ ಮಾತ್ರ ವಾಹನಗಳು ಓಡಾಡುತ್ತಿದ್ದವು. ಇದರ ಮೂಲಕ ಸ್ವಲ್ಪ ಮಟ್ಟಿಗೆ ಟ್ರಾಫಿಕ್ ಒತ್ತಡ ಕಡಿಮೆಯಾದರೂ, ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿರಲಿಲ್ಲ.
ಈಗ ಮತ್ತೊಂದು ದಿಕ್ಕಿನ ಕಾಮಗಾರಿ ಕೂಡ ಅಂತಿಮ ಹಂತ ತಲುಪಿದ್ದು, ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡ ಕಡೆಗೂ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಿದ್ಧತೆ ನಡೆದಿದೆ. ಫೆಬ್ರವರಿಯೊಳಗೆ ಈ ಭಾಗವೂ ಚಾಲನೆಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ. ಹೀಗೆ ಎರಡೂ ದಿಕ್ಕಿನಲ್ಲಿ ಸಂಚಾರ ಆರಂಭವಾದರೆ, ಈ ಮಾರ್ಗ ಬಳಸುವ ವಾಹನ ಸವಾರರಿಗೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.
ಈ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣಕ್ಕೆ ಸುಮಾರು 449 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಸುಮಾರು ಐದು ಕಿಲೋಮೀಟರ್ ಉದ್ದದ ಈ ಮಾರ್ಗವು ನಗರದ ಪ್ರಮುಖ ಸಂಪರ್ಕ ಬಿಂದುಗಳನ್ನು ಜೋಡಿಸುತ್ತದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಸುತ್ತಮುತ್ತ ಐಟಿ ಕಂಪನಿಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ವಸತಿ ಪ್ರದೇಶಗಳು ಹೆಚ್ಚಿರುವುದರಿಂದ ಇಲ್ಲಿ ಸಂಚಾರ ದಟ್ಟಣೆ ಯಾವಾಗಲೂ ಜಾಸ್ತಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಮೇಲ್ಸೇತುವೆ ಯೋಜನೆಗೆ ವಿಶೇಷ ಮಹತ್ವ ನೀಡಲಾಗಿತ್ತು.
2024ರ ಜುಲೈನಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಮಾರ್ಗವನ್ನು ಸಾರ್ವಜನಿಕ ಬಳಕೆಗೆ ತೆರೆಯಲಾಗಿತ್ತು. ಆ ನಂತರ ವಾಹನ ಸವಾರರು ಸ್ವಲ್ಪ ಮಟ್ಟಿಗೆ ಪ್ರಯಾಣ ಸಮಯ ಉಳಿಸಿಕೊಂಡಿದ್ದಾರೆ. ಆದರೆ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡ ಕಡೆಗೆ ಹೋಗುವ ವಾಹನಗಳು ಇನ್ನೂ ಹಳೆಯ ರಸ್ತೆ ಮಾರ್ಗವನ್ನು ಅವಲಂಬಿಸಬೇಕಾಗಿತ್ತು. ಇದರಿಂದ ಜಂಕ್ಷನ್‌ನಲ್ಲಿ ದಟ್ಟಣೆ ಮುಂದುವರಿದಿತ್ತು.
ಈಗ ಎರಡೂ ದಿಕ್ಕುಗಳು ಓಪನ್ ಆದಾಗ ಸ್ವಲ್ಪ ಟ್ರಾಫಿಕ್ ಹಂಚಿಕೆ ಸಮತೋಲನವಾಗಲಿದೆ ಎಂಬ ನಿರೀಕ್ಷೆ ಇದೆ. ಮೇಲ್ಸೇತುವೆ ಬಳಸಿ ವಾಹನಗಳು ನೇರವಾಗಿ ಸಿಗ್ನಲ್‌ಗಳನ್ನು ತಪ್ಪಿಸಿ ಸಾಗಲು ಸಾಧ್ಯವಾಗುತ್ತದೆ. ಇದರಿಂದ ಸಿಲ್ಕ್ ಬೋರ್ಡ್ ಸಿಗ್ನಲ್ ಬಳಿ ವಾಹನಗಳ ಸಾಲು ಕಡಿಮೆಯಾಗಬಹುದು.
ಟ್ರಾಫಿಕ್ ತಜ್ಞರ ಪ್ರಕಾರ, ದೊಡ್ಡ ಜಂಕ್ಷನ್‌ಗಳಲ್ಲಿ ಸಿಗ್ನಲ್ ಮುಕ್ತ ಮಾರ್ಗಗಳು ನಿರ್ಮಾಣವಾದಾಗ ಸಂಚಾರದ ವೇಗ ಹೆಚ್ಚುತ್ತದೆ. ಜೊತೆಗೆ ಇಂಧನ ಬಳಕೆ ಕಡಿಮೆಯಾಗುತ್ತದೆ. ವಾಹನಗಳು ಹೆಚ್ಚು ಸಮಯ ನಿಲ್ಲದೇ ಸಾಗುವ ಕಾರಣ ವಾಯುಮಾಲಿನ್ಯ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ. ಸಿಲ್ಕ್ ಬೋರ್ಡ್ ಪ್ರದೇಶದಲ್ಲಿ ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಸಮಸ್ಯೆ ಕೂಡ ಸಾಕಷ್ಟು ಹೆಚ್ಚು ಇದೆ .
ಬೆಂಗಳೂರಿನ ವಾಹನ ಸವಾರರ ಬಹುಕಾಲದ ಬೇಡಿಕೆ ಏನೆಂದರೆ – ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಶಾಶ್ವತ ಪರಿಹಾರ ಸಿಗಬೇಕು ಎoಬುವುದು . ಡಬಲ್ ಡೆಕ್ಕರ್ ಯೋಜನೆ ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟೆದೆ ಎಂದು ಹೇಳಬಹುದು. ಇದರಿಂದ ದಿನನಿತ್ಯದ ಪ್ರಯಾಣ ಸಮಯದಲ್ಲಿ ಒಳ್ಳೇಯ ಬದಲಾವಣೆ ಕಾಣಬಹುದು ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಐಟಿ ಉದ್ಯೋಗಿಗಳು ವಿಶೇಷವಾಗಿ ಈ ಮಾರ್ಗವನ್ನು ಹೆಚ್ಚು ಬಳಸುತ್ತಾರೆ. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಟ್ರಾಫಿಕ್ ಒತ್ತಡ ಗರಿಷ್ಠ ಮಟ್ಟ ತಲುಪುತ್ತದೆ. ಕೆಲವೊಮ್ಮೆ ಒಂದು ಕಿಲೋಮೀಟರ್ ಪ್ರಯಾಣಕ್ಕೂ 20 ರಿಂದ 30 ನಿಮಿಷ ಬೇಕಾಗುತ್ತಿತ್ತು. ಇದೀಗ ಮೇಲ್ಸೇತುವೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ, ಕೆಲವೇ ನಿಮಿಷಗಳಲ್ಲಿ ಆ ದೂರವನ್ನು ದಾಟುವ ಅವಕಾಶ ಸಿಗಬಹುದು.
ಆದರೆ ಯೋಜನೆ ಯಶಸ್ವಿಯಾಗಲು ಸಮರ್ಪಕ ಟ್ರಾಫಿಕ್ ನಿರ್ವಹಣೆ ಅಗತ್ಯ. ಮೇಲ್ಸೇತುವೆ ತೆರೆಯುವಷ್ಟೇ ಸಾಕಾಗುವುದಿಲ್ಲ, ಕೆಳಭಾಗದ ರಸ್ತೆಗಳಲ್ಲೂ ಸಮನ್ವಯ ಅಗತ್ಯವಿದೆ. ಸಿಗ್ನಲ್ ಸಮಯ ನಿಯಂತ್ರಣ, ಸರಿಯಾದ ಮಾರ್ಗ ಸೂಚಿಗಳು ಮತ್ತು ವಾಹನ ಶಿಸ್ತಿನ ಅನುಸರಣೆ ಮಹತ್ವದ್ದು.
ಒಟ್ಟಿನಲ್ಲಿ ನೋಡಿದರೆ, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಈ ಬದಲಾವಣೆ ಬೆಂಗಳೂರಿನ ಟ್ರಾಫಿಕ್ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟವಾಗಬಹುದು. ವರ್ಷಗಳ ಕಾಲ ಟ್ರಾಫಿಕ್ ನರಕ ಅನುಭವಿಸಿದ ವಾಹನ ಸವಾರರಿಗೆ ಈಗ ನೆಮ್ಮದಿ ಸಿಗುವ ಸಮಯ ಸಮೀಪಿಸುತ್ತಿದೆ.
ಫೆಬ್ರವರಿಯೊಳಗೆ ಎರಡೂ ದಿಕ್ಕುಗಳಲ್ಲಿ ಸಂಚಾರ ಆರಂಭವಾದರೆ, ಸಿಲ್ಕ್ ಬೋರ್ಡ್ ಟ್ರಾಫಿಕ್ ಕಥೆ ಹೊಸ ತಿರುವು ಪಡೆಯಲಿದೆ. ಈಗ ಎಲ್ಲರ ದೃಷ್ಟಿ ಒಂದೇ ಪ್ರಶ್ನೆಯ ಮೇಲೆ – ಈ ಯೋಜನೆ ನಿಜವಾಗಿಯೂ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರವಾಗುತ್ತದೆಯೇ ಎಂದು ಕಾಯ್ದುನೋಡಬೇಕಾಗಿದೆ